ಪ್ರೇಮಜಿತ್ ಲಾಲ್
	20-10-1940. ಭಾರತದ ಪ್ರಸಿದ್ದ ಟೆನಿಸ್ ಆಟಗಾರ. 1954ರಲ್ಲಿ ಟೆನಿಸ್ ಆಡಲು ಪ್ರಾರಂಭಿಸಿದರು. ಇದಕ್ಕೆ ಕಾರಣ ಇವರ ಮಾವ ಖ್ಯಾತ ಟೆನಿಸ್ ಆಟಗಾರ ದಿಲೀಪ್ ಬೋಸರ ಪ್ರೋತ್ಸಾಹ. ಬೋಸ್ ಏಷ್ಯದ ಟೆನಿಸ್ ಚಾಂಪಿಯನ್ ಆಗಿದ್ದರು. ಉತ್ತಮ ಮಾರ್ಗದರ್ಶನ ಪ್ರೋತ್ಸಾಹಗಳ ಜೊತೆಗೆ ತೀವ್ರ ಆಸಕ್ತಿ ಹಾಗೂ ಸತತ ತರಬೇತಿ ಸಿಕ್ಕಿದ್ದರಿಂದ ಲಾಲ್ ಭಾರತದ ಉತ್ತಮ ಆಟಗಾರರಾದರು. ಎರಡು ಸಲ ರಾಷ್ಟ್ರೀಯ ಜ್ಯೂನಿಯರ್ ಪ್ರಶಸ್ತಿ ಪಡೆದರು. 1957ರಲ್ಲಿ ಡೇವಿಸ್ ಕಪ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು. 1958ರಲ್ಲಿ ವಿಂಬಲ್ಡನ್ ಜ್ಯೂನಿಯರ್ ಪ್ರಶಸ್ತಿ ಪಡೆದು ಪ್ರಪಂಚದ ಟೆನಿಸ್ ಆಟಗಾರರ ಸಾಲಿಗೆ ಸೇರಿದರು. ಇವರ ಬಿರುಸಿನ ಹೊಡೆತಗಳನ್ನು ನೋಡುವುದೇ ಒಂದು ಸಂತೋಷ. 1966ರಲ್ಲಿ ಭಾರತೀಯ ಆಟಗಾರರ ತಂಡ ಡೇವಿಸ್ ಕಪ್ ಆಹ್ವಾನ ಸುತ್ತನ್ನು ಮುಟ್ಟಿದಾಗ ಅದರಲ್ಲಿ ಲಾಲ್ ಇದ್ದರು. 1967ರಲ್ಲಿ ಡೇವಿಸ್ ಕಪ್ ಪೂರ್ವವಲಯ ಅಂತಿಮ ಪಂದ್ಯಗಳು ನವದೆಹಲಿಯಲ್ಲಿ ನಡೆದುವು. ಆಗ ಲಾಲ್ ಅತ್ಯುತ್ತಮವಾಗಿ ಆಡಿದರು. ಪ್ರಥಮ ಪಂದ್ಯದಲ್ಲಿ ಜಪಾನಿನ ಕೆ. ವತಾನಬೆಯನ್ನು, ಅನಂತರ ಪಂದ್ಯದಲ್ಲಿ ಐ. ಕೊನಿಕಿಯನ್ನು ಪರಾಭವಗೊಳಿಸಿದರು. ಡಬಲ್ಸ್ ಪಂದ್ಯದಲ್ಲಿ ಭಾರತದ ಶ್ರೇಷ್ಠ ಆಟಗಾರರಾದ ರಾಮನಾಥನ್ ಕೃಷ್ಣನ್ ಜೊತೆ ಜಪಾನಿನ ಕೆ. ವತಾನಬೆ ಮತ್ತು ಐ. ವತಾನಬೆ ಜೋಡಿಯನ್ನು ಪರಾಭವಗೊಳಿಸಿದರು. 1967, 1968 ಮತ್ತು 1970ರಲ್ಲಿ ರಾಷ್ಟ್ರೀಯ ಸಿಂಗಲ್ಸ್ ಚಾಂಪಿಯನ್‍ಷಿಪ್ ಗಿಟ್ಟಿಸಿದರು. 1968ರಲ್ಲಿ ಏಷ್ಯನ್ ಟೆನಿಸ್ ಪಂದ್ಯದಲ್ಲಿ ಜಯದೀಪ ಮುಖರ್ಜಿಯವರೊಂದಿಗೆ ಪುರುಷರ ಡಬಲ್ಸ್ ಆಟದಲ್ಲಿ ಜಯಗಳಿಸಿದರು. 1970ರಲ್ಲಿ ಬೆಂಗಳೂರಿನಲ್ಲಿ ನಡೆದ ಡೇವಿಸ್ ಕಪ್ ಪೂರ್ವ ವಲಯ ಅಂತಿಮ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು ಸೋಲಿಸಿತು. ಈ ಯಶಸ್ವಿಗೆ ಲಾಲ್ ಅವರೂ ಕಾರಣರಾಗಿದ್ದರು. 1967-1970ರ ತನಕ ಲಾಲ್ ಭಾರತದ ಸರ್ವಶ್ರೇಷ್ಠ ಆಟಗಾರರಾಗಿದ್ದರು. 1967ರಲ್ಲಿ ಭಾರತ ಸರಕಾರ ಇವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿತು.
(ಎಸ್.ಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ